ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಅಡ್ಡಾದಿಡ್ಡಿ ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಬೃಹತ್ ಯೋಜನೆ ರೂಪಿಸಿದೆ. ನಗರಾಭಿವೃದ್ಧಿ ಇಲಾಖೆಯು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಪಾರ್ಕಿಂಗ್) ನಿಯಮಗಳು-2026’ (Greater Bengaluru Authority Parking Rules 2026) ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಖಾಲಿ ನಿವೇಶನಗಳನ್ನು ಪಾರ್ಕಿಂಗ್ ಸ್ಥಳಗಳಾಗಿ ಬದಲಾಯಿಸುವ ಮಾಲೀಕರಿಗೆ ಆಸ್ತಿ ತೆರಿಗೆಯಲ್ಲಿ ಭಾರಿ ವಿನಾಯಿತಿ ಘೋಷಿಸಿದೆ.
ಇದರೊಂದಿಗೆ ವಾಣಿಜ್ಯ ಸಂಕೀರ್ಣಗಳಿಗೆ ಕಠಿಣ ದಂಡ, ಸಿಎ (CA) ನಿವೇಶನಗಳ ಸದ್ಬಳಕೆ ಹಾಗೂ ಕಟ್ಟುನಿಟ್ಟಿನ ಪಾರ್ಕಿಂಗ್ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.
ಖಾಲಿ ಸೈಟ್ ಪಾರ್ಕಿಂಗ್ಗೆ ಆಸ್ತಿ ತೆರಿಗೆ 100% ವಿನಾಯಿತಿ!
ಖಾಲಿ ನಿವೇಶನ (Vacant Plot) ಹೊಂದಿರುವ ಮಾಲೀಕರು ತಮ್ಮ ಜಾಗವನ್ನು ಪಾರ್ಕಿಂಗ್ಗಾಗಿ ಬಿಟ್ಟುಕೊಟ್ಟರೆ ಸರ್ಕಾರದಿಂದ ಆಸ್ತಿ ತೆರಿಗೆ ಮತ್ತು ಸೇವಾ ಶುಲ್ಕದಲ್ಲಿ ರಿಯಾಯಿತಿ ಸಿಗಲಿದೆ:
- 100% ತೆರಿಗೆ ವಿನಾಯಿತಿ: 30 ರಿಂದ 200 ವಾಹನಗಳ ನಿಲುಗಡೆಗೆ ಸೌಲಭ್ಯ ಕಲ್ಪಿಸಿದರೆ ಶೇ.100 ರಷ್ಟು ತೆರಿಗೆ ವಿನಾಯಿತಿ ಸಿಗಲಿದೆ.
- 50% ತೆರಿಗೆ ವಿನಾಯಿತಿ: ಕನಿಷ್ಠ 15 ಪಿಸಿಯು (PCU) ಸಾಮರ್ಥ್ಯದ ಪಾರ್ಕಿಂಗ್ ನೀಡಿದರೆ ಶೇ.50 ರಷ್ಟು ವಿನಾಯಿತಿ ದೊರೆಯಲಿದೆ.
- ನಿಬಂಧನೆಗಳು: ಪಾರ್ಕಿಂಗ್ ಸ್ಥಳವು ವರ್ಷದಲ್ಲಿ ಕನಿಷ್ಠ 250 ದಿನ ಕಾರ್ಯನಿರ್ವಹಿಸಬೇಕು, ದಿನಕ್ಕೆ ಕನಿಷ್ಠ 12 ಗಂಟೆ ಲಭ್ಯವಿರಬೇಕು ಹಾಗೂ ಕನಿಷ್ಠ ಶೇ.30 ರಷ್ಟು ವಾಹನಗಳು ಭರ್ತಿಯಾಗಿರಬೇಕು. ಪಾರ್ಕಿಂಗ್ ನಿರ್ವಾಹಕರು ಪ್ರತ್ಯೇಕ ಉದ್ದಿಮೆ ಪರವಾನಗಿ ಪಡೆಯುವ ಅಗತ್ಯವಿಲ್ಲ, ಕೇವಲ ಅನುಮತಿ ಪತ್ರ ಪಡೆದರೆ ಸಾಕು.
ಸಿಎ ಸೈಟ್ ಮತ್ತು ಖಾಲಿ ಸರ್ಕಾರಿ ಜಾಗಗಳ ಬಳಕೆ
- ನಗರ ಪಾಲಿಕೆ ಜಾಗಗಳು, ಬಳಕೆಯಾಗದ ಸರ್ಕಾರಿ ನಿವೇಶನಗಳು ಹಾಗೂ ಹಂಚಿಕೆಯಾಗದ ಸಿಎ ನಿವೇಶನಗಳಲ್ಲಿ ಪಾರ್ಕಿಂಗ್ ಸಂಕೀರ್ಣಗಳನ್ನು ನಿರ್ಮಿಸಲು ಯೋಜಿಸಲಾಗಿದೆ.
- ಕೋರ್ಟ್ ವ್ಯಾಜ್ಯದಲ್ಲಿರುವ ಜಾಗಗಳನ್ನು ಪ್ರಕರಣ ಇತ್ಯರ್ಥವಾಗುವವರೆಗೆ ತಾತ್ಕಾಲಿಕ ಮೇಲ್ಮೈ (Surface) ಪಾರ್ಕಿಂಗ್ಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
- ಮೆಟ್ರೋ ಹಾಗೂ ಉಪನಗರ ರೈಲು ನಿಲ್ದಾಣಗಳ ಬಳಿ ‘ಪಾರ್ಕ್ ಆಂಡ್ ರೈಡ್’ (Park & Ride) ವ್ಯವಸ್ಥೆ ತರಲಿದ್ದು, ಸಮೂಹ ಸಾರಿಗೆ ಬಳಸುವವರಿಗೆ ಕಡಿಮೆ ಪಾರ್ಕಿಂಗ್ ಶುಲ್ಕ ವಿಧಿಸಲಾಗುತ್ತದೆ.
ವಸತಿ ಪ್ರದೇಶದ ಪಾರ್ಕಿಂಗ್ ಪರವಾನಗಿ ಶುಲ್ಕ ಮತ್ತು ರಿಯಾಯಿತಿಗಳು
ವಸತಿ ಪ್ರದೇಶಗಳಲ್ಲಿ ರಸ್ತೆಬದಿ ಕಾರು ಪಾರ್ಕ್ ಮಾಡಲು ಮಾಸಿಕ/ವಾರ್ಷಿಕ ಪರವಾನಗಿ ಕಡ್ಡಾಯಗೊಳಿಸಲಾಗುತ್ತಿದ್ದು, ಶುಲ್ಕದ ವಿವರಗಳು ಹೀಗಿವೆ:
- ಸಣ್ಣ ಕಾರುಗಳು: ವಾರ್ಷಿಕ ₹15,000
- ಸೆಡಾನ್ ಕಾರುಗಳು: ವಾರ್ಷಿಕ ₹20,000
- ಎಸ್ಯುವಿ (SUV) ಕಾರುಗಳು: ವಾರ್ಷಿಕ ₹25,000
- ರಾತ್ರಿ ಪಾರ್ಕಿಂಗ್ ರಿಯಾಯಿತಿ: ರಾತ್ರಿ 8 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಮಾತ್ರ ಪಾರ್ಕಿಂಗ್ ಸಂಕೀರ್ಣ ಬಳಸುವ ಸಾರ್ವಜನಿಕರಿಗೆ ಮಾಸಿಕ ಶುಲ್ಕದಲ್ಲಿ 50% ರಿಯಾಯಿತಿ ಸಿಗಲಿದೆ.
ಪಾರ್ಕಿಂಗ್ ನಿಷೇಧಿತ ವಲಯಗಳ ಅಂತರ (No-Parking Distances)
| ಸ್ಥಳ / ಜಂಕ್ಷನ್ | ನಿಷೇಧಿತ ಪಾರ್ಕಿಂಗ್ ಅಂತರ |
| ಸಿಗ್ನಲ್ ಇರುವ ಜಂಕ್ಷನ್ಗಳು | 100 ಮೀಟರ್ |
| ಸಾಮಾನ್ಯ ರಸ್ತೆ ಜಂಕ್ಷನ್ಗಳು | 50 ಮೀಟರ್ |
| ಸಿಗ್ನಲ್ ಇಲ್ಲದ ಮುಖ್ಯರಸ್ತೆ ಜಂಕ್ಷನ್ | 25 ಮೀಟರ್ |
| ಬಸ್ ನಿಲ್ದಾಣಗಳ ಎರಡೂ ಬದಿ | 25 ಮೀಟರ್ |
| ಮೆಟ್ರೋ/ರೈಲು ನಿಲ್ದಾಣಗಳ ರಸ್ತೆಗಳು | 150 ಮೀಟರ್ ವ್ಯಾಪ್ತಿಯಲ್ಲಿ ‘ನೋ-ಪಾರ್ಕಿಂಗ್’ |
ವಾಣಿಜ್ಯ ಕಟ್ಟಡಗಳಿಗೆ ಕಠಿಣ ದಂಡ & ಒಸಿ (OC) ರದ್ದು!
ಮಂಜೂರಾದ ನಕ್ಷೆಯಂತೆ ವಾಣಿಜ್ಯ ಕಟ್ಟಡಗಳು ಪಾರ್ಕಿಂಗ್ ಜಾಗ ಮೀಸಲಿಡುವುದು ಕಡ್ಡಾಯ.
- ಪಾರ್ಕಿಂಗ್ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಿದರೆ ವಾರಕ್ಕೆ ₹1,000 ದಂಡ ವಿಧಿಸಲಾಗುತ್ತದೆ. 3 ತಿಂಗಳೊಳಗೆ ಸರಿಪಡಿಸದಿದ್ದರೆ ಸ್ವಾಧೀನಾನುಭವ ಪ್ರಮಾಣಪತ್ರ (Occupancy Certificate – OC) ರದ್ದುಪಡಿಸಲಾಗುತ್ತದೆ.
- ಪಾರ್ಕಿಂಗ್ ಕೊರತೆಯಿದ್ದು ಸಮೀಪದ ಜಾಗ ಗುತ್ತಿಗೆ ಪಡೆಯದಿದ್ದರೆ ವಾರಕ್ಕೆ ₹5,000 ದಂಡ ಹಾಗೂ ಟ್ರೇಡ್ ಲೈಸೆನ್ಸ್ ರದ್ದುಗೊಳಿಸಲಾಗುತ್ತದೆ.
ಅಕ್ರಮ ಪಾರ್ಕಿಂಗ್ಗೆ ದಂಡ ಮತ್ತು ಚಾಲನಾ ಪರವಾನಗಿ (DL) ಅಮಾನತು
- ಅನಧಿಕೃತ ರಸ್ತೆ ಪಾರ್ಕಿಂಗ್ ದಂಡ: ಕಾರುಗಳಿಗೆ ₹500, ಬೈಕ್ಗಳಿಗೆ ₹300.
- ಫುಟ್ಪಾತ್ ಪಾರ್ಕಿಂಗ್ ದಂಡ: ಕಾರುಗಳಿಗೆ ₹1,000, ಬೈಕ್ಗಳಿಗೆ ₹600.
- ಡಿಎಲ್ ಅಮಾನತು: ಪದೇಪದೆ ಪಾರ್ಕಿಂಗ್ ನಿಯಮ ಉಲ್ಲಂಘಿಸುವ ಚಾಲಕರ ಚಾಲನಾ ಪರವಾನಗಿಯನ್ನು (DL) ಸಂಚಾರ ಪೊಲೀಸರು ಅಮಾನತುಗೊಳಿಸಲಿದ್ದಾರೆ.
- ಟೋಯಿಂಗ್ ನಿಯಮ: ವಾಹನ ಟೋಯಿಂಗ್ ಮಾಡುವ ಮೊದಲು ನಂಬರ್ ಪ್ಲೇಟ್ ಸಮೇತ ವೀಡಿಯೋ ರೆಕಾರ್ಡ್ ಮಾಡುವುದು ಕಡ್ಡಾಯ. ಈ ವೀಡಿಯೋವನ್ನು 3 ತಿಂಗಳು ಭದ್ರವಾಗಿಡಬೇಕಾಗುತ್ತದೆ.
ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
‘ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಪಾರ್ಕಿಂಗ್) ಕರಡು ನಿಯಮಗಳು-2026’ಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಸಲಹೆ ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ವಿಕಾಸಸೌಧ, ಬೆಂಗಳೂರು ಈ ವಿಳಾಸಕ್ಕೆ ಲಿಖಿತವಾಗಿ ಆಕ್ಷೇಪಣೆ ಕಳುಹಿಸಬಹುದಾಗಿದೆ.