ರಾಜ್ಯದಲ್ಲಿ ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿರುವ ಲಕ್ಷಾಂತರ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಮಹತ್ವದ ಮಾಹಿತಿಯೊಂದನ್ನು ನೀಡಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ (FDA) ಹಾಗೂ ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ‘ಕರ್ನಾಟಕ ನಾಗರಿಕ ಸೇವೆಗಳ ತಿದ್ದುಪಡಿ ನಿಯಮಗಳು-2026’ ಕರಡು ಅಧಿಸೂಚನೆಯನ್ನು ಗ್ಯಾಜೆಟ್ನಲ್ಲಿ ಪ್ರಕಟಿಸಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳ ಪಾರದರ್ಶಕತೆ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಪರೀಕ್ಷಾ ಮಾದರಿಯಲ್ಲಿ ಕಠಿಣ ಹಾಗೂ ಅಭ್ಯರ್ಥಿ ಸ್ನೇಹಿ ತಿದ್ದುಪಡಿಗಳನ್ನು ತರಲಾಗಿದೆ.
ಪ್ರಮುಖ ಬದಲಾವಣೆಗಳು ಮತ್ತು ಕರಡು ನಿಯಮಗಳ ವಿವರಗಳು:
- ನೆಗೆಟಿವ್ ಅಂಕಗಳ (Negative Marking) ವ್ಯವಸ್ಥೆ ಜಾರಿ: ಇನ್ಮುಂದೆ ಎಫ್ಡಿಎ ಹಾಗೂ ಎಸ್ಡಿಎ ಸ್ಪರ್ಧಾತ್ಮಕ ಪರೀಕ್ಷೆಯ ಎರಡೂ ಪತ್ರಿಕೆಗಳಿಗೂ ಋಣಾತ್ಮಕ ಅಂಕಗಳ ನಿಯಮ ಅನ್ವಯವಾಗಲಿದೆ. ಅಭ್ಯರ್ಥಿಗಳು ನೀಡುವ ಪ್ರತಿಯೊಂದು ತಪ್ಪು ಉತ್ತರಕ್ಕೆ ಆ ಪ್ರಶ್ನೆಗೆ ನಿಗದಿಪಡಿಸಿದ ಅಂಕದ ನಾಲ್ಕನೇ ಒಂದು ಭಾಗದಷ್ಟು (1/4th – 0.25) ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
- ಕನಿಷ್ಠ ಅರ್ಹತಾ ಅಂಕ ನಿಯಮ: ಪರೀಕ್ಷೆಯಲ್ಲಿ ಮೆರಿಟ್ ಪಟ್ಟಿಯಲ್ಲಿ ಪರಿಗಣಿತವಾಗಲು ಅಭ್ಯರ್ಥಿಗಳು ಕನಿಷ್ಠ ಶೇ. 35ರಷ್ಟು ಅಂಕಗಳನ್ನು ಕಡ್ಡಾಯವಾಗಿ ಗಳಿಸಿರಲೇಬೇಕು.
- ಪರೀಕ್ಷಾ ಅವಧಿ ವಿಸ್ತರಣೆ (ಸಿಹಿಸುದ್ದಿ): ಅಭ್ಯರ್ಥಿಗಳಿಗೆ ಪ್ರಶ್ನೆಗಳನ್ನು ಸರಿಯಾಗಿ ಓದಿ ಉತ್ತರಿಸಲು ಅನುಕೂಲವಾಗುವಂತೆ ಪರೀಕ್ಷಾ ಅವಧಿಯನ್ನು ಈ ಹಿಂದಿನ 90 ನಿಮಿಷಗಳಿಂದ (1.5 ಗಂಟೆ) 2 ಗಂಟೆಗಳಿಗೆ (120 ನಿಮಿಷಗಳು) ಹೆಚ್ಚಿಸಲಾಗಿದೆ.
- ಶೈಕ್ಷಣಿಕ ಅರ್ಹತೆ: ಎಫ್ಡಿಎ (ಸಹಾಯಕರು) ಹುದ್ದೆಗೆ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ (Degree) ಹಾಗೂ ಎಸ್ಡಿಎ (ಕಿರಿಯ ಸಹಾಯಕರು) ಹುದ್ದೆಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಅರ್ಹತೆಯನ್ನು ನಿಗದಿಪಡಿಸಲಾಗಿದೆ.
- ಪಠ್ಯಕ್ರಮದ ಸ್ವರೂಪ: ಪತ್ರಿಕೆ-1 ರ ಪಠ್ಯಕ್ರಮವನ್ನು ಅಭ್ಯರ್ಥಿಗಳ ಅರ್ಹತೆಗೆ ಅನುಗುಣವಾಗಿ ರೂಪಿಸಲಾಗುತ್ತದೆ. ಪತ್ರಿಕೆ-2 ರ ಪಠ್ಯಕ್ರಮವನ್ನು ಹುದ್ದೆಯ ಸ್ವರೂಪ ಆಧರಿಸಿ ನೇಮಕಾತಿ ಪ್ರಾಧಿಕಾರದೊಂದಿಗೆ ಸಮಾಲೋಚಿಸಿ ಅಂತಿಮಗೊಳಿಸಲಾಗುತ್ತದೆ.
- ನೇಮಕಾತಿ ಮತ್ತು ಹೆಚ್ಚುವರಿ ಪಟ್ಟಿ (Waiting List): ಆಯ್ಕೆಯಾದ ಅಭ್ಯರ್ಥಿಗಳು ನಿಗದಿತ ಸಮಯದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿದ್ದರೆ, ಆ ಸ್ಥಾನಕ್ಕೆ ಹೆಚ್ಚುವರಿ ಪಟ್ಟಿಯಲ್ಲಿರುವ (Additional List) ಇತರ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ಅಲ್ಲದೆ, ಆಯ್ಕೆಯಾದ ಅಭ್ಯರ್ಥಿಗಳು ರಾಜ್ಯದ ಯಾವುದೇ ಭಾಗದಲ್ಲಿ ಸೇವೆ ಸಲ್ಲಿಸಲು ಮಾನಸಿಕವಾಗಿ ಸಿದ್ಧರಿರಬೇಕಾಗುತ್ತದೆ.
ಆಕ್ಷೇಪಣೆ ಸಲ್ಲಿಕೆಗೆ 15 ದಿನಗಳ ಕಾಲಾವಕಾಶ: ಈ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಅಥವಾ ಉದ್ಯೋಗಾಕಾಂಕ್ಷಿಗಳು ತಮ್ಮ ಆಕ್ಷೇಪಣೆ ಅಥವಾ ಸಲಹೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಸ್ವೀಕೃತವಾಗುವ ಸಲಹೆಗಳನ್ನು ಪರಿಶೀಲಿಸಿದ ನಂತರ ಸರ್ಕಾರವು ಅಂತಿಮ ಅಧಿಸೂಚನೆಯನ್ನು ಹೊರಡಿಸಲಿದೆ.